Thursday, October 22, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ರಹೀಂಖಾನ್‍ಗೆ ಸಚಿವ ಸ್ಥಾನ: ಬೀದರ ನಲ್ಲಿ ಮುಖ್ಯಮಂತ್ರಿಗೆ ಜಾನಸನ್ ಘೋಡೆ ಮನವಿ ಪತ್ರ

ರಹೀಂಖಾನ್‍ಗೆ ಸಚಿವ ಸ್ಥಾನ: ಬೀದರ ನಲ್ಲಿ ಮುಖ್ಯಮಂತ್ರಿಗೆ ಜಾನಸನ್ ಘೋಡೆ ಮನವಿ ಪತ್ರ

ಬೀದರ್: ಬೀದರ್ ಶಾಸಕ ರಹೀಂಖಾನ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ನಗರಕ್ಕೆ ಸೋಮವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಅವರಿಗೆ ಜಿಡಗಾ ಮುಗಳಕೋಡ  ಮಠದ ಪೀಠಾಧಿಪತಿಗಳಾದ  ಮುರುಘರಾಜೇಂದ್ರ ಸ್ವಾಮೀಜಿ ಅವರ ಭಾವಚಿತ್ರ ಕೊಟ್ಟು ಸನ್ಮಾನಿಸಿ, ಮನವಿ ಪತ್ರ ಸಲ್ಲಿಸಿದರು.
2028 ರ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ರಹೀಂಖಾನ್ ಅವರಿಗೆ ಸಚಿವ ಸ್ಥಾನ ಕೊಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ರಹೀಂಖಾನ್ ಅವರು ರಾಜ್ಯದ ಅಲ್ಪಸಂಖ್ಯಾತರ ಪ್ರಭಾವಿ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದು ಸ್ಥಾನಗಳಲ್ಲಿ ಪಕ್ಷ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಎರಡು ಬಾರಿ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೊಳಿಸಿದ್ದಾರೆ. ಶಾಸಕರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ನಿರಂತರ ಜನ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಹಿತ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಬೇಡಿಕೆ ಮಂಡಿಸಿದರು.
ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ವಜುರೆ, ಎನ್‍ಎಸ್‍ಯುಐ ಜಿಲ್ಲಾ ಘಟಕದ ಉಪಾಧ್ಯಕ್ಷ ರತ್ನದೀಪ ಕಸ್ತೂರೆ, ಪ್ರಮುಖರಾದ ರಾಜರತನ್ ಸಿಂಧೆ, ಬಸವರಾಜ ಲಕ್ಕಾ ಮತ್ತಿತರರು ಇದ್ದರು.