Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಮಗು ಬ್ರೀಚ್ ಪ್ರೆಸೆಂಟೇಶನ್ (Breech Presentation) ಸ್ಥಿತಿಯಲ್ಲಿದ್ದ ಕಾರಣ ಪರಿಸ್ಥಿತಿ ಸವಾಲಿನದ್ದಾಗಿತ್ತು

ಮಗು ಬ್ರೀಚ್ ಪ್ರೆಸೆಂಟೇಶನ್ (Breech Presentation) ಸ್ಥಿತಿಯಲ್ಲಿದ್ದ ಕಾರಣ ಪರಿಸ್ಥಿತಿ ಸವಾಲಿನದ್ದಾಗಿತ್ತು


ಆಂಬುಲೆನ್ಸ್‌ನಲ್ಲಿಯೇ ಯಶಸ್ವಿ ಹೆರಿಗೆ – ತಾಯಿ, ಮಗು ಸುರಕ್ಷಿತ

ಬೀದರ್, ಸೆ. 23: ತೀವ್ರ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಆಂಬುಲೆನ್ಸ್‌ನಲ್ಲಿಯೇ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದ್ದು, ತಾಯಿ ಹಾಗೂ ನವಜಾತ ಶಿಶು ಇಬ್ಬರೂ ಸುರಕ್ಷಿತವಾಗಿರುವ ಘಟನೆ ಸೆಪ್ಟೆಂಬರ್ 23ರಂದು ಬೆಳಗಿನ ಜಾವ 6:35ರ ಸುಮಾರಿಗೆ ನಡೆದಿದೆ.

ಹೊನ್ನಡ್ಡಿ ಗ್ರಾಮದ ಭಾಗ್ಯಶ್ರೀ (26), ಪತಿ ಸುನಿಲ್ ಅವರು ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮನ್ನಾ-ಎಖೇಳ್ಳಿ ಸಮುದಾಯ ಆರೋಗ್ಯ ಕೇಂದ್ರದಿಂದ ಬೀದರ್‌ನ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ 108 ಆಂಬುಲೆನ್ಸ್ ಮೂಲಕ ರೆಫರ್ ಮಾಡಲಾಗಿತ್ತು.

ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಮಠಾಣ ಟೋಲ್ ಗೇಟ್ ಸಮೀಪ ಭಾಗ್ಯಶ್ರೀ ಅವರ ಹೆರಿಗೆ ನೋವು ತೀವ್ರಗೊಂಡಿದೆ. ಈ ಸಂದರ್ಭದಲ್ಲಿ ಆಂಬುಲೆನ್ಸ್‌ನ ತುರ್ತು EMT ಗೌತಮ ಪತಂಗೆ ಹಾಗೂ ಚಾಲಕರಾದ  ನಾಗಶೆಟ್ಟಿ ಹೂಗಾರ್ ಅವರು ಸಮಯ ಪ್ರಜ್ಞೆ ಮೆರೆದು ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ವಿಶೇಷವಾಗಿ, ಮಗು ಬ್ರೀಚ್ ಪ್ರೆಸೆಂಟೇಶನ್ (Breech Presentation) ಸ್ಥಿತಿಯಲ್ಲಿದ್ದ ಕಾರಣ ಪರಿಸ್ಥಿತಿ ಸವಾಲಿನದ್ದಾಗಿತ್ತು. ಆದರೂ ಆಂಬುಲೆನ್ಸ್ ಸಿಬ್ಬಂದಿ ಧೈರ್ಯ ಹಾಗೂ ಸಮಯ ಪ್ರಜ್ಞೆಯಿಂದ ಆಂಬುಲೆನ್ಸ್‌ನಲ್ಲಿಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ಭಾಗ್ಯಶ್ರೀ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ನವಜಾತ ಶಿಶು ಇಬ್ಬರೂ ಸುರಕ್ಷಿತವಾಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಹಾಗೂ ಆರೈಕೆಗಾಗಿ ತಾಯಿ ಮತ್ತು ಮಗುವನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತುರ್ತು ಹಾಗೂ ಸವಾಲಿನ ಪರಿಸ್ಥಿತಿಯಲ್ಲಿ ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಸುರಕ್ಷಿತ ಹೆರಿಗೆಗೆ ನೆರವಾದ 108 ಆಂಬುಲೆನ್ಸ್ ಸಿಬ್ಬಂದಿಗಳಾದ  EMT ಗೌತಮ ಪತಂಗೆ ಹಾಗೂ  ನಾಗಶೆಟ್ಟಿ ಹೂಗಾರ್ ಅವರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ವಿಶ್ವ ಗಾಯಕ್ವಾಡ್, ಬೀದರ್ WWW.VISHWADAARI.COM