Thursday, October 22, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ರೋಗಿಗಳ ಸಂಬಂಧಿಕರೇ ವಾರ್ಡ್ ಬಾಯ್ ಮತ್ತು ಆಯಾ ಆಗಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ

ರೋಗಿಗಳ ಸಂಬಂಧಿಕರೇ ವಾರ್ಡ್ ಬಾಯ್ ಮತ್ತು ಆಯಾ ಆಗಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ

ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ!

ತಪಾಸಣೆಗೆ ಕರೆದೊಯ್ಯಲು ಸಂಬಂಧಿಕರೇ ವಾರ್ಡ್ ಬಾಯ್, ಆಯಾ ಆಗಬೇಕೇ?

ಮೇಲ್ವಿಚಾರಕರು, ಮೇಲಧಿಕಾರಿಗಳ ಗಮನಕ್ಕೆ ಬಾರದಿರುವುದೇಕೆ?

ಬೀದರ: ಬೀದರ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳು ಹಾಗೂ ಅವರ ಸಂಬಂಧಿಕರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ರೋಗಿಗಳನ್ನು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಸ್ಥಳಾಂತರಿಸುವ ಸಂದರ್ಭವಾಗಲಿ, ತಪಾಸಣೆಗಾಗಿ ಕರೆದೊಯ್ಯುವ ಸಂದರ್ಭವಾಗಲಿ, ರೋಗಿಗಳ ಸಂಬಂಧಿಕರೇ ರೋಗಿಗಳನ್ನು ಹಿಡಿದುಕೊಂಡು, ವೀಲ್‌ಚೇರ್ ಅಥವಾ ಟ್ರಾಲಿ ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ರೋಗಿಗಳ ಆರೈಕೆ ಹಾಗೂ ಅವರನ್ನು ಅಗತ್ಯ ಸ್ಥಳಗಳಿಗೆ ಕರೆದೊಯ್ಯುವ ಜವಾಬ್ದಾರಿ ಹೊಂದಿರುವ ವಾರ್ಡ್ ಬಾಯ್ ಮತ್ತು ಆಯಾ ಸಿಬ್ಬಂದಿ ಇದ್ದರೂ, ಅಗತ್ಯ ಸಂದರ್ಭದಲ್ಲಿ ಅವರ ಸೇವೆ ಸಿಗುತ್ತಿಲ್ಲವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನು, ಆಸ್ಪತ್ರೆಯಲ್ಲಿರುವ ಸಿಬ್ಬಂದಿಯ ಕಾರ್ಯವೈಖರಿಯನ್ನು ಮೇಲ್ವಿಚಾರಣೆ ಮಾಡಬೇಕಾದ ಮೇಲ್ವಿಚಾರಕರು ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರಾಗಿರುತ್ತಾರೆ. ಅನಾರೋಗ್ಯದಿಂದ ಬಳಲುತ್ತಿರುವ ರೋಗಿಯ ಜೊತೆಗಿರುವ ಸಂಬಂಧಿಕರು ಈಗಾಗಲೇ ಆತಂಕದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ರೋಗಿಯನ್ನು ತಪಾಸಣೆಗೆ ಕರೆದೊಯ್ಯುವುದರಿಂದ ಹಿಡಿದು ಒಂದು ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಸ್ಥಳಾಂತರಿಸುವವರೆಗೂ ಎಲ್ಲಾ ಹೊಣೆಯನ್ನೂ ಸಂಬಂಧಿಕರೇ ಹೊರುವಂತಾದರೆ, ಆಸ್ಪತ್ರೆಯ ಸಿಬ್ಬಂದಿಯ ಸೇವೆ ಯಾವ ಕಾರಣಕ್ಕಾಗಿ ಎಂಬ ಪ್ರಶ್ನೆ ಎದುರಾಗುತ್ತದೆ.

ರೋಗಿಗಳ ಸಂಬಂಧಿಕರೇ ವಾರ್ಡ್ ಬಾಯ್ ಮತ್ತು ಆಯಾ ಆಗಬೇಕಾದ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ?

ಕರ್ತವ್ಯದಲ್ಲಿರುವ ಸಿಬ್ಬಂದಿ ನಿಜವಾಗಿಯೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆಯೇ?

ಮೇಲ್ವಿಚಾರಕರು ಹಾಗೂ ಮೇಲಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿದ್ದಾರೆಯೇ?

ಬಡ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಸಿಬ್ಬಂದಿ ಸೇವೆ ಖಚಿತಪಡಿಸುವುದು ಆಸ್ಪತ್ರೆಯ ಆಡಳಿತದ ಜವಾಬ್ದಾರಿಯಾಗಿದೆ. ಆದ್ದರಿಂದ ಈ ಆರೋಪಗಳ ಕುರಿತು ಬ್ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಪರಿಶೀಲನೆ ನಡೆಸಿ, ವಾಸ್ತವ ಸ್ಥಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ರೋಗಿಗಳ ಸೇವೆಯೇ ಆಸ್ಪತ್ರೆಯ ಮೊದಲ ಆದ್ಯತೆಯಾಗಬೇಕೇ ಹೊರತು, ರೋಗಿಗಳ ಸಂಬಂಧಿಕರ ಮೇಲೆಯೇ ಹೆಚ್ಚುವರಿ ಹೊರೆ ಬೀಳಬಾರದು.

ವರದಿ: ವಿಶ್ವ ಗಾಯಕವಾಡ, ಬೀದರ