Saturday, October 24, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮಾರ್ಚ್ 17ರಂದು ಮಹಾ ಪ್ರತಿಭಟನೆ

ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮಾರ್ಚ್ 17ರಂದು ಮಹಾ ಪ್ರತಿಭಟನೆ
ಬಲಗೈ ಸಮುದಾಯಗಳಿಗೆ ಒಳಮೀಸಲಾತಿ ನೀತಿಯಿಂದ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪದ ಹಿನ್ನೆಲೆ, ಅದರ ವಿರುದ್ಧವಾಗಿ ಮಾರ್ಚ್ 17, 2026ರಂದು ಬೀದರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಈ ಕುರಿತು ಮಾರ್ಚ್ 10, 2026ರಂದು ಮಧ್ಯಾಹ್ನ 12 ಗಂಟೆಗೆ ಬೀದರ ನಗರದ ಹೋಟೆಲ್ ವೃಂದಾವನದಲ್ಲಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಕಾರ್ಯಕಾರಿ ಸಮಿತಿ ವತಿಯಿಂದ ಸಭೆ ನಡೆಯಿತು. ಸಭೆಯಲ್ಲಿ ಒಳಮೀಸಲಾತಿ ಮತ್ತು ರೋಸ್ಟರ್ ಬಿಂದುಗಳ ಪರಿಣಾಮವಾಗಿ ಬಲಗೈ ಸಮುದಾಯದವರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ ಉಂಟಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಅದೇ ರೀತಿ ಬಲಗೈ ಸಮುದಾಯದ ಸಚಿವರ ತೇಜೋವಧೆ ಮಾಡಿ ಅಸ್ಪೃಶ್ಯ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಖಂಡಿಸಿ, ಇದಕ್ಕೆ ತಕ್ಕ ಉತ್ತರ ನೀಡಲು ಬೀದರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರು ಹಾಗೂ ಸಚಿವರು ಬಲಗೈ ಸಮುದಾಯಕ್ಕೆ ಒಳಮೀಸಲಾತಿಯಿಂದ ಅನ್ಯಾಯವಾಗದಂತೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿ ಪತ್ರ ಬರೆದು ಮನವಿ ಸಲ್ಲಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬೀದರ ಜಿಲ್ಲೆಯ ಸ್ವಾಭಿಮಾನಿ ಅಂಬೇಡ್ಕರ್ ವಾದಿಗಳು, ಬಲಗೈ ಸಮುದಾಯದ ಹೋರಾಟಗಾರರು, ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರು, ನಿವೃತ್ತ ನೌಕರರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿರುವ ಪದವೀಧರರು, ಮಹಿಳೆಯರು ಹಾಗೂ ಯುವಕರು ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೋರಾಟ ಸಮಿತಿಯವರು ಮನವಿ ಮಾಡಿದ್ದಾರೆ.
ಈ ಕುರಿತು ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮಹೇಶ್ ಗೋರನಾಳಕರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅರುಣ ಪಟೇಲ್, ಪವನ ಮೀಠಾರೆ, ಸಂಜುಕುಮಾರ ಸಾಗರ, ಪ್ರದೀಪ್ ನಾಟೇಕರ್, ರಾಹುಲ್ ಡಾಂಗೆ ಮತ್ತು ಪ್ರಕಾಶ ರಾವಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.