Bidar ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾರ್ಚ್ 14 ಮತ್ತು 15 ರಂದು ಆಯೋಜಿಸಲು ಉದ್ದೇಶಿಸಿದ್ದ B. R. Ambedkar ಅವರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಾರ್ವಜನಿಕ ಹಾಗೂ ಅಂಬೇಡ್ಕರೈಟ್ ಸಂಘಟನೆಗಳ ವಿರೋಧದ ಹಿನ್ನೆಲೆ ಮುಂದೂಡಲಾಗಿದೆ.
ʼಡಾ. ಬಿ.ಆರ್. ಅಂಬೇಡ್ಕರ್ ಅವರ ಭಾರತದ ಪ್ರಸ್ತುತ ಸವಾಲುಗಳು, ಚಿಂತನೆಗಳು ಮತ್ತು ಸಮಕಾಲೀನ ಪರಿಹಾರಗಳುʼ ಎಂಬ ವಿಷಯದ ಕುರಿತು ಎರಡು ದಿನಗಳ ಕಾಲ ವಿಚಾರ ಸಂಕಿರಣವನ್ನು ನಡೆಸಲು ಯೋಜಿಸಲಾಗಿತ್ತು. ಮಾರ್ಚ್ 14 ರಂದು ಬೀದರ್ ನಗರದ ಬೆಲ್ದಾಳೆ ಕನ್ವೆನ್ಷನ್ ಹಾಲ್ನಲ್ಲಿ ಮತ್ತು ಮಾರ್ಚ್ 15 ರಂದು ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು.
ಕಾರ್ಯಕ್ರಮದ ಬಗ್ಗೆ ಜಿಲ್ಲೆಯಾದ್ಯಂತ ಸಮರ್ಪಕ ಪ್ರಚಾರ ಮಾಡದೇ ದಿಢೀರನೆ ಆಯೋಜಿಸಲು ಪ್ರಯತ್ನಿಸಿರುವುದನ್ನು ವಿರೋಧಿಸಿ ವಿವಿಧ ಅಂಬೇಡ್ಕರೈಟ್ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಕಾರ್ಯಕ್ರಮವನ್ನು ಮುಂದೂಡಬೇಕು, ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ನಡೆಸಬೇಕು ಹಾಗೂ ರಾಷ್ಟ್ರೀಯ ಮಟ್ಟದ ಅಂಬೇಡ್ಕರೈಟ್ ಚಿಂತಕರನ್ನು ಆಹ್ವಾನಿಸಿ ಅರ್ಥಪೂರ್ಣವಾಗಿ ನಡೆಸಬೇಕು ಎಂಬ ಬೇಡಿಕೆಗಳು ಮುಂದಿಟ್ಟಲಾಗಿದ್ದವು.
ಈ ಹಿನ್ನೆಲೆಯಲ್ಲಿ Dalit Unity Movement ಸಂಘಟನೆಯ ಮುಖಂಡರಾದ
ವಿನೋದ್ ರತ್ನಾಕರ್ (ಸ್ಥಾಪಕರು)
ಪ್ರಕಾಶ್ ರಾವಣ (ರಾಜ್ಯಾಧ್ಯಕ್ಷರು)
ವಿನೀತ್ ಗಿರಿ (ಜಿಲ್ಲಾಧ್ಯಕ್ಷರು)
ಇವರ ನೇತೃತ್ವದಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು. ಜೊತೆಗೆ ಭೀಮ್ ಗರ್ಜನೆ ಸಂಘಟನೆಯ ರಾಜ್ಯಾಧ್ಯಕ್ಷ ರಾಹುಲ್ ಡಾಂಗೆ, ದಲಿತ ಹೋರಾಟಗಾರರಾದ ರಮೇಶ್ ಪಾಸ್ವಾನ್ ಮತ್ತು ಸುಭಾಷ್ ಲಾಧಾ ಸೇರಿದಂತೆ ಹಲವರು ಕಾರ್ಯಕ್ರಮದ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದೆ ಎಂದು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಹೆಚ್ಚಿನ ಅರ್ಥಪೂರ್ಣತೆಯೊಂದಿಗೆ ಹಾಗೂ ವ್ಯಾಪಕ ಪ್ರಚಾರದೊಂದಿಗೆ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ದಾರಿ