Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಎಲ್ಲ ಧರ್ಮ ಗ್ರಂಥಗಳಿಗಿಂತ ದೇಶಕ್ಕೆ ಸಂವಿಧಾನ ಗ್ರಂಥವೇ ಶ್ರೇಷ್ಠವಾಗಿದೆ'

ಎಲ್ಲ ಧರ್ಮ ಗ್ರಂಥಗಳಿಗಿಂತ ದೇಶಕ್ಕೆ ಸಂವಿಧಾನ ಗ್ರಂಥವೇ ಶ್ರೇಷ್ಠವಾಗಿದೆ'
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ. ಬಡವರ, ಶೋಷಿತರ, ದೀನ ದಲಿತರ, ಮಹಿಳೆಯರು ಸೇರಿದಂತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಸಾರ್ವಕಾಲಿಕವಾದದ್ದು ಮತ್ತು ಜಾಗತಿಕ ಮಟ್ಟಕ್ಕೆ ಅನ್ವಯವಾಗುವಂಥದ್ದು ಎಂದು ಪತ್ರಕರ್ತ ಬಾಲಾಜಿ ಕುಂಬಾರ ಹೇಳಿದರು.

ಔರಾದ ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಏ.14ರಂದು ಬೆಳಿಗ್ಗೆ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ʼಸಮಾಜದ ಎಲ್ಲ ವರ್ಗಗಳ ಜನರೂ ಸಮಾನ ಹಕ್ಕು-ಅವಕಾಶಗಳನ್ನು ಹೊಂದಬೇಕು ಹಾಗೂ ಅನುಭವಿಸಬೇಕು ಎಂಬ ವಿಚಾರಧಾರೆಯನ್ನು ಬಲವಾಗಿ ಪ್ರತಿಪಾದಿಸುತ್ತಾ ಅದನ್ನು ಸಂವಿಧಾನದಲ್ಲಿ ಅಳವಡಿಸಲು ಅಂಬೇಡ್ಕರ್ ಅವರು ಯಶಸ್ವಿಯಾದರು. ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಮಹಿಳಾ ಪ್ರಾತಿನಿಧ್ಯ ವಿಚಾರಗಳಿಗೆ ಸಂಬಂಧಿಸಿದಂತೆ ಬಾಬಾ ಸಾಹೇಬರು ಕ್ರಾಂತಿಕಾರಿ ಮನೋಭಾವ ಹೊಂದಿದ್ದರು. ಅಲ್ಲದೆ, ಸಮಾಜದ ಏಳಿಗೆ ಹಾಗೂ ರಾಷ್ಟ್ರದ ಪ್ರಗತಿಯ ಹಾದಿ ಬಗ್ಗೆ ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರುʼ ಎಂದು ಹೇಳಿದರು.

ʼಸಮಾನತೆ ಇಲ್ಲದ ಸ್ವಾತಂತ್ರ್ಯ ವ್ಯರ್ಥ ಎಂಬುದನ್ನು ಪ್ರತಿಪಾದಿಸಿದ ಅಂಬೇಡ್ಕರ್, ಸಮಾಜದ ಕೆಳವರ್ಗದ ಹಾಗೂ ತುಳಿತಕ್ಕೊಳಗಾದ ಅವಕಾಶ ವಂಚಿತರನ್ನು ಮೇಲೆತ್ತಲು ಇಡೀ ಜೀವನ ತ್ಯಾಗ ಮಾಡಿ ಶ್ರಮಿಸಿದರು. ಬಾಲ್ಯದಿಂದಲೇ ಅನೇಕ ನೋವು, ಅನುಮಾನ, ಟೀಕೆಗಳು ಎದುರಿಸಿದ ಅವರು ಎಲ್ಲವನ್ನೂ ತಮ್ಮ ಜ್ಞಾನದ ಮುಖಾಂತರವೇ ಉತ್ತರಿಸಿದರು. ಭಾರತದಲ್ಲಿ ಇಂದಿಗೂ ಜಾತಿಯತೆ, ಅಸ್ಪೃಶ್ಯತೆ, ಆರ್ಥಿಕ ಅಸಮಾನತೆ, ಬಡತನ ಜೀವಂತವಿದೆ. ಇಂತಹ ಅನೇಕ ಜಟಿಲ ಸಮಸ್ಯೆಗಳಿಗೂ ಸಂವಿಧಾನದಿಂದ ಪರಿಹಾರ ಕಂಡುಕೊಳ್ಳಬಹುದು. ಬದುಕಿಗೆ ರಕ್ತ ಎಷ್ಟು ಮುಖ್ಯವೋ ಹಾಗೇ ದೇಶಕ್ಕೆ ಸಂವಿಧಾನ ಅಷ್ಟೇ ಮುಖ್ಯವಾಗಿದೆ. ಎಲ್ಲ ಧರ್ಮ ಗ್ರಂಥಗಳಿಗಿಂತ ದೇಶಕ್ಕೆ ಸಂವಿಧಾನ ಗ್ರಂಥವೇ ಶ್ರೇಷ್ಠವಾಗಿದೆ' ಎಂದರು.

ಸಮಾರಂಭ ಅಧ್ಯಕ್ಷತೆ ವಹಿಸಿದ ಶಾಸಕ ಪ್ರಭು ಚವ್ಹಾಣ ಮಾತನಾಡಿ, ʼಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ 140 ಕೋಟಿ ಜನತೆಯ ಅಮೂಲ್ಯ ಆಸ್ತಿ. ಅವರ ಚಿಂತನೆಗಳು ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳು ಇಂದಿಗೂ ದೇಶದ ಪ್ರಗತಿಗೆ ದಿಕ್ಕು ತೋರಿಸುತ್ತಿವೆʼ ಎಂದು ಅಭಿಪ್ರಾಯಪಟ್ಟರು.

ʼದಲಿತ ಕುಟುಂಬದಿಂದ ಬಂದ ಅವರು ದಲಿತರು, ಶೋಷಿತರು, ಹಿಂದುಳಿದವರ ಹಕ್ಕುಗಳಿಗಾಗಿ ಜೀವನಪೂರ್ತಿ ಹೋರಾಟ ನಡೆಸಿದ ಮಹಾನ್ ನಾಯಕರು. ಬಾಬಾ ಸಾಹೇಬರು ಮತ್ತು ಸಂವಿಧಾನ ಇರುತ್ತಿಲ್ಲವೆಂದರೆ ನಾನು ಶಾಸಕನಾಗಲು ಸಾಧ್ಯವಿರಲಿಲ್ಲ. ದೇಶದ ಸಂಪೂರ್ಣ ಆಡಳಿತ ವ್ಯವಸ್ಥೆಯು ಅಂಬೇಡ್ಕರ್ ನೀಡಿದ ಸಂವಿಧಾನದ ಮೇಲೆ ನಿಂತಿದೆ. ಸೂರ್ಯ ಚಂದ್ರರಿರುವ ವರಗೆಗೆ ಅಂಬೇಡ್ಕರ್ ಅವರ ಹೆಸರು ಅಜರಾಮರವಾಗಿ ಉಳಿಯಲಿದೆʼ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಂದ ಉತ್ತೀರ್ಣರಾದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳ ವಿದ್ಯಾರ್ಥಿಗಳು, ನಿಲಯ ಪಾಲಕರು ಹಾಗೂ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ತಹಸೀಲ್ದಾರ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಆರಕ್ಷಕ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಉತ್ತಮ್ ಸಂಘನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರವಿ ಸುಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಅನೀಲಕುಮಾರ ಲೋಕೋಪಯೋಗಿ ಇಲಾಖೆಯ ಎಇಇ ಪ್ರೇಮಸಾಗರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಾಶಿನಾಥ ರಾಠೋಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಇತರರು ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯತ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ನಿರೂಪಿಸಿ ವಂದಿಸಿದರು.